Tuesday, March 11, 2008

ಕತ್ತಲು - ಬೆಳಕು - ವಿಷಾದ

ವಿಷಾದದ ವಿಷಮ ಗಳಿಗೆಯೊಳು
ಗಾಳಿಯಂತೆ ತೂರಿ ಹೋದ ಭಾವನೆಗಳಿಗೆ
ಹೊಸ ಭಾವ ನೀಡುವ ಬಯಕೆ.

ಕಾಣುವುದೇ ಹೊಸ ಚಿಗುರು,
ಕುಡಿಯೊಡೆಯುವುದೇ ಮೊಳಕೆ,
ಕಾತರದಿ ಕಾದಿದೆ ಮನವು.
ಕಾಣದ ಬಣ್ಣಗಳ ಅರಸಿ ಹೊರಟ
ಬದುಕು ಸಾಗಿದೆ ಎತ್ತ?

ಚಿತ್ತದಿ ಹೊಳೆದಿತ್ತು ಆ ಸುಂದರ
ಮುಂಜಾವಿನ ನೆನಹು...
ಮಂಜು ಮುಸುಕಿರಲು, ಮಾಸಿದ
ಮೋಡಗಳ ನಡುವಿಂದ
ಹೊರಹೊಮ್ಮಿದಾಗ ನೇಸರ
ಮಿನುಗಿತ್ತು ಧರೆ...

ಚರಿತ್ರ...

ಮನಸಿನ ಮಾತು...

ಮನದಾಳದಿ ಮಡುಗಟ್ಟಿದೆ ಮೌನ
ನಂಬಿಕೆಯ ಬುಡಕಿದು ಕೊಡಲಿಪೆಟ್ಟು
ಕಲಕಿ ಹೋಗಿದೆ ಮನವು
ಹಟ ಮೆಟ್ಟಿ ನಿಂತಿದೆ ಮಾತನು.

ನೋಡಲಾರೆನು, ತಿಳಿಯಲಾರೆನು
ಸತ್ಯವ್ಯಾವುದು, ಯಾವುದು ಮಿಥ್ಯ?
ಎಲ್ಲಾ ಅಪ್ಯಾಯಮನ, ಆದರದು
ಅನಿವಾರ್ಯ ಎಲ್ಲರೊಳಿರಲು.

ಕಾಡಿದೆ ಮರೆತ ಮಾತು,
ನೀಡಿದ ಭಾಷೆ, ಪಡೆದ
ಸ್ನೇಹದ ಕಾಣಿಕೆ. ಎಲ್ಲ ಮರೆತ
ಮೇಲೆ ಕಾಡಿದರೇನಂತೆ? ಸಾವಿಗೆ ಸಮ.

ಮರೆತೆಯೇಕೆ ಪ್ರೀತಿಸಲು?
ಆಗದೆ ತಪ್ಪನು ಮನ್ನಿಸಲು?
ಅಸಲಿಗೆ ತಪ್ಪಾದರು ಏನು?
ನಿನಗೆ ಬೇಕಾದುದಾದರು ಏನು?

ಸ್ವಛ್ಛಂಧ ಹಾರು ಹಕ್ಕಿಯ ರೆಕ್ಕೆ
ಕತ್ತರಿಸಿದ್ದೇಕೆ? ಹಕ್ಕಿ ಹಾರಿ ಹಾರಿ
ಸೂರ್ಯನ ತಲುಪಿತ್ತೇ? ತನ್ನ
ಗೂಡು ಮರೆತಿತ್ತೇ? ಮರೆತು ತನ್ನ
ಬಾಳ ತಾ ನರಕ ಮಾಡಿಕೊಂಡಿತೇ?

ಉತ್ತರದ ನಿರೀಕ್ಷೆಯಲಿ ಕಾಡಿದೆ
ಪ್ರಶ್ನೆ ಮತ್ತಷ್ಟು...

ಚರಿತ್ರ...